ಕಾರವಾರ

 ಮೈಸೂರು ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಪಟ್ಟಣ, ಬಂದರು, ಜಿಲ್ಲಾಕೇಂದ್ರ; ಕಾರವಾರ ತಾಲ್ಲೂಕಿನ ಮುಖ್ಯಸ್ಥಳ. ಉ.ಅ. 14o 49' 19" ಮತ್ತು ಪೂ.ರೇ. 74o 13' 48" ಮೇಲಿರುವ ಕಾರವಾರ ಪಟ್ಟಣ ಸುಮಾರು 2 ಮೈ. ಉದ್ದ; ಕೆಲವೇ ಫರ್ಲಾಂಗುಗಳ ಅಗಲ ಇದೆ. ಜನಸಂಖ್ಯೆ. 27,777. ಕಾರವಾರದ ಪೂರ್ವದ ಬದಿಗೆ ಸಹ್ಯಾದ್ರಿಯ ಶ್ರೇಣಿ ಹಬ್ಬಿದೆ. ಉತ್ತರಕ್ಕೆ ಕಾಲಿ ನದಿ ಹರಿದು ಸಮುದ್ರವನ್ನು ಸಂಗಮಿಸುತ್ತದೆ. ಬಹುದೂರ ನೇರವಾಗಿ ಸಾಗುವ ಪಶ್ಚಿಮ ಕರಾವಳಿ ಕಾರವಾರದ ಬಳಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಂತಿದೆ.

 ಕಾರವಾರಕ್ಕೆ ಈ ಹೆಸರು ಬರಲು ಇದರ ಬಳಿಯ ಹಳ್ಳಿಯಾದ ಕಡವಾಡ ಕಾರಣ. 18ನೆಯ ಶತಮಾನದಲ್ಲಿ ಬ್ರಿಟಿಷರು ಇಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಿದ್ದರು. ಕಡವಾಡವನ್ನು ಅವರು ಕಾರವಾರವೆಂಬ ಕರೆದರು. ಬ್ರಿಟಿಷರು ಆ ಕಾರ್ಖಾನೆಯನ್ನು ಮುಚ್ಚಿದಾಗ ಕಾರವಾರವೆಂಬ ಹೆಸರೂ ಮರೆಯಾಗಿತ್ತು. 1869ರಲ್ಲಿ ಇಲ್ಲಿಯ ಪೌರಸಭೆ ಕಾರವಾರ ಎಂಬ ಹೆಸರನ್ನು ಅಧಿಕೃತವಾಗಿ ಬಳಕೆಗೆ ತಂದಿತು. ಅದಕ್ಕೆ ಮುಂಚೆ ಅದು ಸದಾಶಿವಗಡ ಪೌರಸಭೆ ಎನಿಸಿಕೊಂಡಿತ್ತು.

 ಕಾರವಾರದ ಉತ್ತರದಲ್ಲಿ ಕೋಡಿಭಾಗದಲ್ಲಿ ಅರಣ್ಯ ಇಲಾಖೆ ತೆರೆದಿರುವ ಕೋಠಿಯೊಂದಿದೆ. ಮಲೆನಾಡಿನ ಅರಣ್ಯದಿಂದ ತೇಲಿಸಿ ತಂದ ತೇಗದ ಮರದ ದಿಮ್ಮಿಗಳನ್ನು ಇಲ್ಲಿ ಕೂಡಿಸಿ ಬೇರೆ ಎಡೆಗಳಿಗೆ ಕಳುಹಿಸಲಾಗುತ್ತದೆ. ಪಶ್ಚಿಮಕ್ಕೆ ದೂರದಲ್ಲಿ ಸಮುದ್ರದಲ್ಲಿರುವ ದೇವಗಡ ನಡುಗಡ್ಡೆಯ ಮೇಲೆ ದೀಪಸ್ತಂಭವೊಂದನ್ನು ನಿರ್ಮಿಸಲಾಗಿದೆ. ಕಾರವಾರದ ಸನಿಯದಲ್ಲೇ ಸಮುದ್ರದಲ್ಲಿರುವ ಕೂರ್ಮಗಡ ನಡುಗಡ್ಡೆಯ ಎತ್ತರ ಸಮುದ್ರಮಟ್ಟದಿಂದ 180'. ಇಲ್ಲಿ ಪೂರ್ವದ ಕಡೆಗೆ ಒಂದು ಕೋಟೆಯೂ ನರಸಿಂಹ ದೇವಸ್ಥಾನವೂ ಒಂದು ಬಾವಿಯೂ ಉಂಟು. ಪ್ರತಿವರ್ಷವೂ ಡಿಸೆಂಬರಿನಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ದೇವಸ್ಥಾನದ ಮೂರ್ತಿಯನ್ನು ಅರಬ್ಬರು ತಂದರೆಂದು ಪ್ರತೀತಿ. ಇಲ್ಲಿಯ ಕೋಟೆಯನ್ನು ಕಟ್ಟಿಸಿದವ ಶಿವಾಜಿ. ಅವನಿಂದಲೇ ಇದಕ್ಕೆ ಸಿದ್ದಗಡ ಎಂದು ನಾಮಕರಣವಾಯಿತು. 1715ರಲ್ಲಿ ಕಡವಾಡದಿಂದ ಕಲ್ಲುಗಳನ್ನು ತಂದು ಈ ಕೋಟೆಯ ನಿರ್ಮಾಣವನ್ನು ಪೂರೈಸಲಾಯಿತು. ಆಗಿನಿಂದ ಇದಕ್ಕೆ ಕೂರ್ಮಗಡವೆಂಬ ಹೆಸರು ಬಂತು. ಟಿಪ್ಪುವಿನ ಕಾಲದಲ್ಲಿ ಈ ಕೋಟೆಯ ಪ್ರದೇಶ ಆಕ್ರಮಣಕ್ಕೆ ಒಳಗಾಗಿತ್ತು.

 ಕಾರವಾರದ ಪೂರ್ವಬದಿಯ ನೀಳ ಪರ್ವತಶ್ರೇಣಿ ಸೌಂದರ್ಯಪೂರಿತವಾದ್ದು. ಕಾರವಾರದ ಗುಡ್ಡಗಳಲ್ಲಿ ಪ್ರಸಿದ್ಧವಾದ್ದು ಗುಡ್ಡೆಹಳ್ಳಿ. ಸಮುದ್ರಮಟ್ಟದಿಂದ ಸು. 1,500' ಎತ್ತರದಲ್ಲಿರುವ ಇದು ವನಭೋಜನ ಸ್ಥಳ. ಜನಸಂಚಾರಕ್ಕೆ ಹೆಚ್ಚು ಅನುಕೂಲವಿಲ್ಲದ ಗುಹೆಯ ಒಳಗಡೆ ಇರುವ ಕರಿನಾಸ್ ಎಂಬ ಪುರಾತನ ಶಿಲೆ ಐತಿಹ್ಯದಿಂದ ಕೂಡಿದ್ದು. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಪ್ರಸಿದ್ಧ ಸೆಜ್ಜೇಶ್ವರ ಲಿಂಗದ ದೇವಾಲಯವಿರುವುದು ಕಾರವಾರದಿಂದ 2 ಮೈ. ದೂರದಲ್ಲಿ. ಇದು ಗೋಕರ್ಣಕ್ಕೆ ಸಮನಾದ ಪಾವಿತ್ರ್ಯ ಪಡೆದದ್ದೆಂದು ಪ್ರತೀತಿ.

 ಕಾರವಾರದ ಪೂರ್ವದಲ್ಲಿರುವ ಕಡವಾಡದ ಪ್ರಾಚೀನ ನಾಮ ಕಾಡೇವರ. ಇದು ಹಿಂದೆ ವ್ಯಾಪಾರಕೇಂದ್ರವಾಗಿತ್ತು. ಫಿನಿಶಿಯನರ ಕಾಲದಿಂದಲೂ ಇದು ಪಾಶ್ಚಾತ್ಯರೊಂದಿಗೆ ಸಂಪರ್ಕ ಪಡೆದಿತ್ತೆಂದೂ ಇಂಗ್ಲಿಷರು ಇಲ್ಲಿ 1639ರಲ್ಲಿ ಸ್ಥಾಪಿಸಿದ್ದ ಕಾರ್ಖಾನೆಯಲ್ಲಿ 5,000 ಮಂದಿ ನೇಕಾರರು ಮಸ್ಲಿನ್ ವಸ್ತ್ರನೇಯ್ಗೆಯಲ್ಲಿ ನಿರತರಾಗಿದ್ದರೆಂದೂ ಹೇಳಲಾಗಿದೆ. ಇಲ್ಲಿಯ ವಸ್ತ್ರ ಹುಬ್ಬಳ್ಳಿ ಮುಂತಾದ ಕಡೆಗಳಲ್ಲೂ ಮಾರಾಟವಾಗುತ್ತಿತ್ತು. ಕಡವಾಡ ಆಗ ಶಿವಾಜಿಯ ಒಡೆತನದಲ್ಲಿತ್ತು. ಇಂಗ್ಲಿಷರು ಅವನಿಗೆ ಒಮ್ಮೆ ಕರವನ್ನೂ ಕೊಟ್ಟಿದ್ದರು. ಅನಂತರ ಇದು ಬಿಜಾಪುರದ ಸುಲ್ತಾನರ ವಶಕ್ಕೆ ಬಂದಂತೆ ತಿಳಿದುಬರುತ್ತದೆ. ಬಿಜಾಪುರದ ರಾಜ್ಯಪಾಲ ಇಲ್ಲಿ ವಾಸಿಸುತ್ತಿದ್ದ. 1675ರಲ್ಲಿ ಶಿವಾಜಿಯ ಸೈನ್ಯ ಈ ಸ್ಥಳವನ್ನು ಸುಟ್ಟಿತೆಂದೂ ಆದರೆ ಇಂಗ್ಲಿಷರ ಕಾರಖಾನೆಗೆ ನಷ್ಟವಾಗಲಿಲ್ಲವೆಂದೂ ಹೇಳಲಾಗಿದೆ. 1720ರಲ್ಲಿ ಸೋದೆಯ ರಾಜ ಇಂಗ್ಲಿಷರನ್ನು ಇಲ್ಲಿಂದ ಉಚ್ಚಾಟಿಸಿದ. ಕಲ್ಯಾಣದಿಂದ ವಲಸೆ ಬಂದ ಕೊಂಕಣರು ಮೊದಲು ಇಲ್ಲೇ ನೆಲಸಿದ್ದರೆಂದೂ ಮುಸಲ್ಮಾನರ ವಿರಸದಿಂದಾಗಿ ಸದಾಶಿವಗಡಕ್ಕೆ ಹೋದರೆಂದೂ ತಿಳಿದುಬರುತ್ತದೆ. ಕಡವಾಡದ ಬಳಿಯಲ್ಲಿರುವ `ಹೆದಾರ ಘಾಟ್' ಪ್ರಸಿದ್ಧವಾದ್ದು. ಈ ಮಾರ್ಗ ಹಾವಿನಂತೆ ಬಳಸಿ ಸಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಹೆದಾರ್ ಘಾಟ್ ಮಾರ್ಗ ಒಂದು ಎಂಜಿನಿಯರಿಂಗ್ ಸಾಹಸ. ಹೈದರ್ ಈ ಮಾರ್ಗವಾಗಿ ಸಂಚರಿಸುತ್ತಿದ್ದನೆಂದು ಹೇಳಲಾಗಿದೆ. ಕಡವಾಡದಲ್ಲಿ ಒಂದು ವೈಷ್ಣವ ಮಠವುಂಟು. ಮಧ್ವಾಚಾರ್ಯರು ಇದನ್ನು ಸಂದರ್ಶಿಸಿದ್ದರಂತೆ. ಕಡವಾಡದ ಕೊಲ್ಲಿ ಮೀನುಗಾರಿಕೆಗೆ ಅನುಕೂಲಕರ. ಏಡಿಗಳನ್ನು ಹಿಡಿಯುವುದು ಒಂದು ಮೋಜಿನ ಹವ್ಯಾಸ.

 ಕಾರವಾರದ ವೈಶಿಷ್ಟ್ಯವೆಂದರೆ ಅದರ ನೈಸರ್ಗಿಕ ಬಂದರು. ನೈಋತ್ಯ ಮತ್ತು ಈಶಾನ್ಯದ ಗಾಳಿಗಳಿಂದ ರಕ್ಷಣೆ ಪಡೆದಿರುವ ಈ ಬಂದರು ಅತ್ಯಂತ ಸುರಕ್ಷಿತವಾದ್ದು. ಆದರೆ ಇದು ಇನ್ನೂ ಸರ್ವಋತು ಬಂದರಾಗಿಲ್ಲ. ಕಾರವಾರ ಬಂದರನ್ನು ಅಭಿವೃದ್ಧಿಪಡಿಸಲು ಎರಡು ಹಂತಗಳ ಯೋಜನೆಯೊಂದು ಸಿದ್ಧವಾಗಿದೆ. ಬಳ್ಳಾರಿಯ ಪ್ರದೇಶದ ಕಬ್ಬಿಣದ ಅದುರು ಕಾರವಾರ ಬಂದರಿನಿಂದಲೂ ಸಾಗುತ್ತದೆ. ದೊಡ್ಡ ಹಡಗುಗಳು ಈಗ ದಂಡೆಯಿಂದ ಮೂರು ಯೂನಿಟ್ ಆಚೆ ನಿಲ್ಲುತ್ತವೆ. ಸದಾಶಿವಗಡ ಅಥವಾ ಚಿತ್ಕುಲ ಬಂದರು ಇರುವುದು ಇದರ ಉತ್ತರಕ್ಕೆ. ಕಡವಾಡ ಬಂದರು ಸ್ವಲ್ಪ ಒಳಭಾಗದಲ್ಲಿದೆ. ಬಳಿಯಲ್ಲಿರುವ ಅಂಜದಿವಿ ನಡುಗಡ್ಡೆ ಪೋರ್ಚುಗೀಸರಿಗೆ ಸೇರಿತ್ತು.

 ಕಾರವಾರದ ಅನೇಕ ಸ್ಥಳಗಳ ಮೇಲೆ ಅರಬ್ ಪ್ರಭಾವವನ್ನು ಕಾಣಬಹುದು. ಕಾರವಾರ ಬಂದರಿಗೆ ರಕ್ಷಣೆ ನೀಡಿರುವ ಗುಡ್ಡಕ್ಕೆ ಅಲ್ಲನ ಗುಡ್ಡವೆಂಬ ಹೆಸರಿತ್ತು. ಇಂಗ್ಲಿಷರಿಂದ ಇದು `ಪೀರ್ ಹಿಲ್' ಎಂಬ ನಾಮಾಂಕಿತ ಪಡೆಯಿತು. ಅರಬ್ಬಿ ಮತ್ತು ಪರ್ಷಿಯನ್ ಮೂಲದಿಂದ ಬಂದ ಅನೇಕ ಶಬ್ದಗಳನ್ನು ಕಾರವಾರದ ನೌಕಾ ಪರಿಭಾಷೆಯಲ್ಲಿ ಕಾಣಬಹುದು. ಅರಬ್ಬಿಯ ಬಲಾಂಜದಿಂದ (ಹಡಗಿನ ಕೋಣೆ) ಬಂದದ್ದು ಬಲಾಂವ (ಸಣ್ಣ ದೋಣಿ). ಡುಂಗಿ (ಸಣ್ಣ ದೋಣಿ), ನಕ್ವಾ (ಹಡಗಿನ ಚಾಲಕ) ಎಂಬವು ಕ್ರಮವಾಗಿ ಅರಬೀ ಭಾಷೆಯ ದುನಿಜ ಮತ್ತು ನಖುಡಾ ಶಬ್ದಗಳಿಂದ ವ್ಯುತ್ಪತ್ತಿ ಹೊಂದಿವೆ.

 ಮೀನುಗಾರಿಕೆ ಇಲ್ಲಿಯ ಮುಖ್ಯ ಕಸಬು. ದೋಣಿ ಕಟ್ಟುವುದೂ ಕೈಮಗ್ಗದ ನೇಯ್ಗೆ ಕೆಲಸವೂ ಇತರ ಉದ್ಯಮಗಳು. ಕಾರವಾರದಲ್ಲಿ ಜಿಲ್ಲಾ ಕಚೇರಿಯೂ ಆಸ್ಪತ್ರೆ ಮತ್ತು ಶಾಲಾ ಕಾಲೇಜುಗಳೂ ಇವೆ. ಗೋವೆ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರುಗಳಿಗೆ ರಸ್ತೆ ಸಂಪರ್ಕವಿದೆ. ಗೋವೆ, ಮುಂಬಯಿ, ಕುಮಟ ಮತ್ತ ಕೊಚ್ಚಿಗಳಿಗೆ ಕರಾವಳಿಯ ಹಡಗು ಸಂಬಂಧವುಂಟು.

 ಕಾರವಾರ ತಾಲ್ಲೂಕು ಹೆಚ್ಚು ಮಳೆಯ ಪ್ರದೇಶ. ವರ್ಷದಲ್ಲಿ ಆರು ತಿಂಗಳು ಮಳೆಗಾಲ. ತೇಗ, ಮತ್ತಿ, ಹೊನ್ನೆ, ಜಂಬೆ ಮುಂತಾದವು ಮುಖ್ಯ ಅರಣ್ಯೋತ್ಪನ್ನಗಳು. ಸಾಗುವಳಿಗೆ ಒದಗಿ ಬಂದಿರುವ ನೆಲ ಕಡಿಮೆ. ಬತ್ತ, ಕಬ್ಬು, ಗೆಣಸು, ಗೇರು ಮತ್ತು ನೆಲಗಡಲೆ-ಇವು ಇಲ್ಲಿಯ ಬೆಳೆಗಳು. ತೆಂಗೂ ವಿಶೇಷ.

(ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ